Saturday, July 20, 2013

ಮೊದಲ ಮಾತು

ನಿಜಕ್ಕೂ ಒಂಟಿತನ ಒಂದು ಅದ್ಭುತ ಅನುಭವ, ಅದಕಿಂತಲೂ ಅದು ಕಲಿಸುವ ಪಾಠ ಅವಿಸ್ಮರಣೀಯ.
ಅದೊಂದು ಪವರ್ ಕಟ್ ಆದ ರಾತ್ರಿ, ಕತ್ತಲೆಯೇ ಮೇಲುಗೈ ಆದ ಹೊತ್ತು, ಹೊತ್ತಿಸಿದ ಮೇಣದ ಬತ್ತಿಯ ತುದಿ ಇರುಳ ತಂಗಾಳಿಯಲಿ ತೂರಾಡುತಿರಲು, ಮನಸಲಿ ಚಿಂತನೆಗಳ ಪ್ರವಾಹ ಮೂಡಿ, ಕಟ್ಟೆ ಹೊಡೆದಾಗ ಹೊರಬಂದ ಚಿತ್ತಾರವೇ ಈ ಪದ ಪುಂಜಗಳ ಹಾರ. 

ವಿಶಾಲವಾದ ಸಾಗರದ ತೀರದಲ್ಲಿ ನಿಂತು ಅನಂತದೆಡೆಗೆ ನೋಡುವಾಗಲೋ ಅಥವ ಆದಿ ಅಂತ್ಯವಿಲ್ಲದ ಆ ಅಗಣಿತ ತಾರೆಗಳ ಮುಡಿದ ಇರುಳ ನಭದೆಡೆಗೆ ನೋಡುವಾಗಲೋ, ಮೂಡುವ ಆ ಅಲೌಕಿಕ ಭಾವನೆ, ಈ ಮೇಣದಬತ್ತಿ ಬೆಳಗಿದ ಇರುಳ ಸಮಯ ಮೂಡಿಸುತ್ತಿದೆ.

ಆಗಷ್ಟೇ ಮಳೆ ನಿಂತು, ಮಿಂದೆದ್ದಿದ ಆ ನೆಲವ ಸೋಕಿ ತೂರಿ ಬರುತಿದ್ದ ತಂಗಾಳಿಯಲಿ, ಒಂಟಿಯಾಗಿ ಕುಳಿತಿರಲು, ಪವರ್ ಕಟ್ ಮೂಡಿಸಿದ ಈ ಸನ್ನಿವೇಶ ನನ್ನ ಎಷ್ಟೋ ದಿನಗಳ ಆಸೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರೇರೇಪಿಸಿದಂತಿತ್ತು.
ಗಾಳಿಯಲ್ಲಿ ತೂರಾಡುತಿದ್ದ ಆ ಮೇಡದ ಜ್ವಾಲೆಯು ನನ್ನ ಮನದಲ್ಲಿ ಮೂಡುತಿದ್ದ ಎಗ್ಗಿಲ್ಲದ ಯೋಚನೆಗಳ ಕನ್ನಡಿಯಂತೆ ಕಂಡು, ಅವುಗಳ ಸೆರೆಹಿಡಿಯಲು ಮನಸ್ಸು ಮಾಡಿದ ಪ್ರಯತ್ನವೇ, ಈ ನನ್ನ ಹೊಸ ಬ್ಲಾಗಿನ ಆರಂಭ.

ಮೂಡುವ ಅದೆಷ್ಟೋ ಆಲೋಚನೆ, ವಿಶ್ಲೇಷಣೆಗಳ ಕೂಡಿಕರಿಸ ಬೇಕೆಂಬ ನನ್ನ ಬಯಕೆಯ ಈಡೇರಿಸಿಕೊಳ್ಳುವ ಪ್ರಯತ್ನ ಇದು!!

No comments:

Post a Comment